ಫ್ರಾನ್ಸೆಸ್ಕಾ, ಡಿ ಗಿಯಾರ್ಜಿಯೊ
	23-9-1439 ಇಟಲಿಯ ವಾಸ್ತುಶಿಲ್ಪಿ, ಚಿತ್ರಕಲಾವಿದ ಮತ್ತು ಶಿಲ್ಪಶಾಸ್ತ್ರಜ್ಞ, ಮಾರ್ಟಿನಿ ಎಂಬ ಉಪನಾಮದಿಂದಲೂ ಖ್ಯಾತ ಮೊದಲಿಗೆ ಹಸ್ತಪ್ರತಿಗಳಿಗಾಗಿ ಮತ್ತು ಪೀಠೋಪಕರಣಗಳಿಗಾಗಿ ಚಿತ್ರಗಳನ್ನು ಬರೆಯುತ್ತಿದ್ದ. ಅನಂತರ ಅರ್ಬಿನೊ ನಗರದ ಡ್ಯೂಕನ ಆಸ್ಥಾನದಲ್ಲಿ ವಾಸ್ತುಶಿಲ್ಪಿಯಾಗಿ ಕೆಲಸಕ್ಕೆ ಸೇರಿದ. ಕ್ರಮೇಣ ತನ್ನ ವಿಶಿಷ್ಟ ಕಲಾಶೈಲಿಯಿಂದಾಗಿ ಯೂರೋಪಿನಲ್ಲೆಲ್ಲ ಹೆಸರುವಾಸಿಯಾದ. ಡ್ಯೂಕನಿಗಾಗಿ ಅತ್ಯುತ್ತಮ ಕಂಚಿನ ಉಬ್ಬುಶಿಲ್ಪಗಳ ಒಂದು ಸರಣಿಯನ್ನೆ ಕಡೆದ. ಅವನ ಸೈನ್ಯದ ಅಗತ್ಯವನ್ನು ಪೂರೈಸುವುದಕ್ಕಾಗಿ 136 ಕೋಟೆ ಕೊತ್ತಲಗಳನ್ನು ನಿರ್ಮಿಸಿದ. ಸಮಕಾಲೀನ ವಾಸ್ತುಶಿಲ್ಪ ಪ್ರಪಂಚದಲ್ಲಿ ಅಧಿಕೃತನೆನಿಸಿದ್ದ ಇವನ ಸಲಹೆ ಸೂಚನೆಗಳಿಗೆ ವ್ಯಾಪಕವಾದ ಬೇಡಿಕೆಯಿತ್ತು. ವಾಸ್ತುಶಿಲ್ಪ ಮತ್ತು ಕಟ್ಟಡ ನಿರ್ಮಾಣಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇವನು ಒದಗಿಸುತ್ತಿದ್ದ ಪರಿಹಾರಗಳು ಇವನಿಗೆ ಅಪಾರ ಕೀರ್ತಿ ತಂದಿದ್ದುವು.

	ಇವನನ್ನು ಕುರಿತಂತೆ ಅನೇಕ ಸಾಹಿತ್ಯಕ ಮತ್ತು ಸಾಹಿತ್ಯೇತರ ಮಾಹಿತಿಗಳು ದೊರಕಿದರೂ ಇಂದು ಇವನು ಒಬ್ಬ ಸಮಸ್ಯಾತ್ಮಕ ವಾಸ್ತುಶಿಲ್ಪಿ ಎಂದೇ ಹೆಸರುವಾಸಿಯಾಗಿದ್ದಾನೆ. ಇವನ ಕೃತಿ ಮತ್ತು ನಿರ್ಮಿತಿಗಳನ್ನು ಕುರಿತಂತೆ ಹಲವಾರು ದಾಖಲೆಗಳು ದೊರಕಿದರೂ ಅವುಗಳ ಬಗ್ಗೆ ಊಹಾಪೋಹಗಳು ಎದ್ದಿದ್ದು ನಿರ್ವಿವಾದವಾಗಿ ಏನನ್ನೂ ಹೇಳಲಾಗುತ್ತಿಲ್ಲ. ಇವನ ಸಮಾಧಿಯ ಮೇಲೆ ಕೆತ್ತಿರುವ ಚರಮವಾಕ್ಯಗಳಲ್ಲಿ ಇವನು ಅರ್ಬಿನೊದ ಡ್ಯೂಕನ ಅರಮನೆಯ ವಾಸ್ತುಶಿಲ್ಪಿ ಎಂದು ಬಣ್ಣಿಸಿರುವುದಾದರೂ ಅದರ ನಿರ್ಮಾಣದಲ್ಲಿ ಇವನ ಪಾತ್ರ ಎಷ್ಟಿತ್ತೆಂಬ ಬಗೆಗೆ ವಿವಾದವಿದೆ. ಇವನ ಸಮಾಧಿಯ ಬಳಿಯಲ್ಲಿಯೆ ಇರುವ ಸಂತ ಬರ್ನಾಡಿನೊ ಚರ್ಚಿನ ಬಗ್ಗೆ ಸಹ ಇದೇ ಮಾತು ಸಲ್ಲುತ್ತದೆ. ಇವೆರಡೂ ಆ ಕಾಲದ ಪ್ರಮುಖ ನಿರ್ಮಾಣಗಳು. ಹೊಸಹುಟ್ಟಿನ ಕಲಾ ಮಾದರಿಯವು. ಅವನ್ನು ನಿಜವಾಗಿಯೂ ಫ್ರಾನ್ಸೆಸ್ಕಾ ನಿರ್ಮಿಸಿದನೆ ಇಲ್ಲವೆ ಎಂಬುದರ ಮೇಲೆಯೆ ಅವನ ಖ್ಯಾತಿ ನಿಲ್ಲುವಂಥವಾಗಿದೆ. ಈ ಕಟ್ಟಡಗಳಲ್ಲಿ ನಿರ್ಮಾತೃವಿನ ಹೆಸರು ನಾವು ಆಧಾರವೆಂದು ಗ್ರಹಿಸುವಷ್ಟರ ಮಟ್ಟಿಗೆ ಖಚಿತವಾಗಿ ಇಲ್ಲದಿರುವುದರಿಂದ ನಿಶ್ಚಿತವಾಗಿ ಏನನ್ನೂ ಹೇಳುವಂತಿಲ್ಲ. ಅಲ್ಲದೆ ಇವನೇ ಕಟ್ಟಿದ್ದು ಎಂದು ಖಚಿತವಾಗಿ ಹೆಸರಿಸಲು ಹಾಗೂ ಇವನ ರಚನೆಯನ್ನು ಶೈಲಿಯನ್ನು ವಿಶ್ಲೇಷಿಸಲು ಬೇರೆ ಯಾವುದೇ ಕಟ್ಟಡಗಳು ದೊರಕದಿರುವುದರಿಂದ ಈ ಪ್ರಶ್ನೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

	ಫ್ರಾನ್ಸೆಸ್ಕಾನ ಹೆಸರಿನಲ್ಲಿ ಕಂಡುಬರುವ ಏಕೈಕ ಕಟ್ಟಡವೆಂದರೆ 1484ರಲ್ಲಿ ನಿರ್ಮಾಣಗೊಂಡ ಕಾರ್ಟೊನಾ ಬಳಿಯಿರುವ ಮೆಡೊನ್ನಾಡೆಲ್ ಕ್ಯಾಲ್ಷಿನೇಯೊ ಎಂಬ ಚರ್ಚು. ಇದೇ ಅಲ್ಲದೆ 1484ರಲ್ಲಿ ಕಟ್ಟಿದ, ಅಂಕೋನಾದಲ್ಲಿರುವ ಏನಜಿಯೋನಿ ಅರಮನೆ ಮತ್ತು 1486 ಈಸಿಯಲ್ಲಿ ನಿರ್ಮಿಸಿದ ಪುರಭವನ ಇವೆರಡರಲ್ಲೂ ಇವನ ಹೆಸರು ಕಂಡುಬರುತ್ತದೆ. ಆದರೆ ಈಚೆಗೆ ಇವೆರಡೂ ಜೀರ್ಣೋದ್ಧಾರಗೊಂಡಿರುವುದರಿಂದ ಇಲ್ಲೂ ಇವನ ಮಹತ್ತ್ವವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಶೈಲಿಯ ದೃಷ್ಟಿಯಿಂದ ಮೇಲೆ ಹೇಳಿದ ಚರ್ಚು ಎರಡನೆಯ ಕ್ರಾನಾಕಾ ಮತ್ತು ಹಿರಿಯ ಆಂಟೊನೆಯೊ ಡ ಸಾಂಗಲ್ಲನ ಶೈಲಿಯನ್ನು ಹೋಲುತ್ತದೆ. 

ಇವನು ಒಬ್ಬ ಉತ್ತಮ ಚಿತ್ರಕಲಾವಿದನೆಂದೂ ಹೆಸರುವಾಸಿಯಾಗಿದ್ದಾನೆ. 1475ರಲ್ಲಿ ಇವನು ರಚಿಸಿದ ಹಾಗೂ ಇವನ ಸಹಿ ಮತ್ತು ದಿನಾಂಕಗಳನ್ನು ಹೊಂದಿರುವ ದಿ ನೇಟಿವಿಟಿ ಎಂಬ ಕಲಾಕೃತಿ ಮಾತ್ರ ದೊರೆತಿದೆ. ಅಲ್ಲದೆ 1471ರಲ್ಲಿಯೆ ರಚನೆಗೊಂಡ ಕಾರೋನೇಷನ್ ಆಫ್ ದಿ ವರ್ಜಿನ್ ಎಂಬ ಕಲಾಕೃತಿ ಸಹ ಇವನದೆಂಬ ವಾದವಿದೆ. ನೆರೊಷಿಯೊ ಎಂಬಾತನೊಡನೆ ಜೊತೆಗೂಡಿ ಫ್ರಾನ್ಸಿಸ್ಕಾ ಅನೇಕ ವೇಳೆ ಕೆಲಸ ಮಾಡುತ್ತಿದ್ದನೆಂದು ಹೇಳಲಾಗಿದೆ. ಇವರ ಸಂಯುಕ್ತ ಕಲಾ ಶೈಲಿಯನ್ನು ಆದರಿಸಿ ಕಲಾ ಇತಿಹಾಸಕಾರರು 60 ಕಲಾಕೃತಿಗಳ ಒಂದು ಸರಣಿಯನ್ನು ರೂಪಿಸಿದ್ದಾರೆ.

	ಒಟ್ಟಿನಲ್ಲಿ ಫ್ರಾನ್ಸೆಸ್ಕಾನ ಕಲಾಬೆಳವಣಿಗೆ ಎದ್ದುಕಾಣುವುದು ಅವನ ಮುಖ್ಯವಾದ ಎರಡು ಕಲಾಕೃತಿಗಳಲ್ಲಿ ಮಾತ್ರ. ಅವುಗಳ ನಡುವಣ ಅಂತರ ಕೇವಲ ನಾಲ್ಕು ವರ್ಷಗಳಾದರೂ ಶೈಲಿಯ ದೃಷ್ಟಿಯಿಂದ ಅವೆರಡರಲ್ಲಿ ಸ್ಪಷ್ಟವಾದ ವ್ಯತ್ಯಾಸ ಕಂಡುಬರುತ್ತದೆ. ಸಮಕಾಲೀನರಾದ ಫ್ಲಾರೆನ್ಸಿನ ಕಲಾವಿದರ, ಅದರಲ್ಲೂ ನೆರೊಷಿಯಸನ ಪ್ರಭಾವ ಎಷ್ಟು ಪರಿಣಾಮಕಾರಿಯಾಗಿ ಇವನ ಮೇಲೆ ಬಿದ್ದಿತ್ತು ಎಂಬುದಕ್ಕೆ ಇದೊಂದು ನಿದರ್ಶನ, ಈ ರೀತಿಯಾಗಿ ಶೈಲಿಯ ಬದಲಾವಣೆ ಉಂಟಾಗಬಹುದು ಎಂಬುದಕ್ಕೆ ಕಾರೋನೇಷನ್ ಕಲಾಕೃತಿಯಲ್ಲಿ ಯಾವ ಮೂನ್ಸೂಚನೆಯೂ ದೊರೆಯುವುದಿಲ್ಲ. ಆದ್ದರಿಂದ ಫ್ಲಾರೆನ್ಸಿನ ಕಲಾಶೈಲಿಯ ಪ್ರಭಾವ 1471-75ರ ಅವಧಿಯಲ್ಲಿ ಉಂಟಾಗಿ ಫ್ರಾನ್ಸೆಸ್ಕಾನ ಕಲಾವಿಕಾಸದ ಮೇಲೆ ಪರಿಣಾಮ ಬೀರಿರಬಹುದೆಂದು ಊಹಿಸಬಹುದು. ಇದೇ ರೀತಿಯ ಸೂಚನೆ ಅವನದೆಂದು ಹೇಳಲಾಗಿರುವ ಸಿಯೆನ್ನಾದ ಬಿಷಪ್ಪರ ಆರಾಧನ ಮಂದಿರದಲ್ಲಿರುವ ನಾಲ್ಕು ಲೋಹ ಕಲಾಕೃತಿಗಳಲ್ಲೂ ಕಂಡುಬರುತ್ತದೆ.

	ಫ್ರಾನ್ಸೆಸ್ಕಾ ಬಹುಮುಖ ಪ್ರತಿಭಾಶಾಲಿ. ವಾಸ್ತುಶಿಲ್ಪದ ಮೇಲೆ ಈತ ಬರೆದ ಕೃತಿ ನಗರಯೋಜನೆ ಮತ್ತು ಸೇನೆ ವಾಸ್ತುಶಿಲ್ಪಗಳನ್ನು ಕುರಿತ ವಿಷಯಗಳನ್ನು ಒಳಗೊಂಡಿದೆ. ಹೊಸಹುಟ್ಟಿನ ಕಾಲದ ವಾಸ್ತುಶಿಲ್ಪ ಸಿದ್ಧಾಂತಗಳ ಮೇಲಿನ ಚರ್ಚೆಯೂ ಇದರಲ್ಲಿ ಸೇರಿದೆ. ಸಿಯೆನ್ನಾ ಕಲಾಶೈಲಿಯ ಲಿಯೊನಾರ್ಡೊದ ವಿಂಚಿಯೆನಿಸಿಕೊಂಡ ಈತ ಹೊಸಹುಟ್ಟಿನ ಕಾಲದ ಶೈಲಿಯನ್ನು ಅಲ್ಲಿನ ಸಾಂಪ್ರದಾಯಿಕ ಶೈಲಿಯೊಡನೆ ಕೂಡಿಸಿ ತನ್ನದೆ ಆದ ವೈಶಿಷ್ಟ್ಯವನ್ನು ಪ್ರದರ್ಶಿಸಿದ.
(ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ